ಮಯೊಸೀನ್ ಸ್ತೋಮಗಳು  ಯ-
ಮಯೊಸೀನ್ ಯುಗದಲ್ಲಿ ರೂಪುಗೊಂಡ ಶಿಲಾಸ್ತೋಮಗಳು. ಈ ಯುಗದ ಆದಿಯಲ್ಲಿ ಯೂರೋಪಿನಲ್ಲಿ ವಿಶಿಷ್ಟ ಭೌಗೋಳಿಕ ಬದಲಾವಣೆಗಳುಂಟಾದುವು. ಆಂಗ್ಲೊ ಫ್ರಾಂಕ್ ಬೆಲ್ಜಿಯನ್ ನಿಕ್ಷೇಪಪ್ರದೇಶ ಭೂಭಾಗವಾಯಿತು. ಅಷ್ಟೇ ಅಲ್ಲ ಬ್ರಿಟಿಷ್ ದ್ವೀಪಗಳೂ ಸೇರಿ ಯೂರೋಪ್ ಖಂಡದ ಉತ್ತರ ಭಾಗವೆಲ್ಲ ಭೂಪ್ರದೇಶವಾಯಿತು. ಆದರೆ ಕೆಳಗಿನ ಮತ್ತು ಬೆಲ್ಜಿಯಮಿನ ತಗ್ಗುಪ್ರದೇಶಗಳಲ್ಲಿ ಸಮುದ್ರ ಇತ್ತು. ಯೂರೋಪಿನ ಮಧ್ಯಭಾಗ ಸಾಗರಾಕ್ರಮಣಕ್ಕೆ ಒಳಗಾಯಿತು. ಇದರ ಒಂದು ಶಾಖೆ ರೈನ್ ಕಣಿವೆಯ ಮೂಲಕ ಮೈನ್ಜ್‍ವರೆಗೆ ಹೋಗಿತ್ತು. ಮತ್ತೊಂದು ಶಾಖೆ ವಿಶಾಲವಾದ ವಿಯನ್ನ ಪ್ರದೇಶವನ್ನು ಆವರಿಸಿತ್ತು. ಸುಯಸ್ ಎಂಬಾತ ಈ ಸಮುದ್ರಾಕ್ರಮಣ ಎರಡು ಹಂತಗಳಲ್ಲಿ ನಡೆದಿದೆ ಎಂದಿದ್ದಾನೆ. ಮೊದಲನೆಯ ಹಂತ ಮಯೊಸೀನ್ ಆದಿಕಾಲದಲ್ಲಿಯೂ ಎರಡನೆಯದು ಮಧ್ಯಕಾಲದಲ್ಲಿಯೂ ನಡೆದುವು. ಈ ಯುಗದಲ್ಲಿ ಇಡೀ ಭೂಮಿಯೇ ಭೂಚಲನೆ ಹಿಡಿತಕ್ಕೆ ಸಿಕ್ಕಿತ್ತೆಂದು ಹೇಳಬಹುದು. ಇದರ ಪ್ರಭಾವದಿಂದ ಮೈನ್ಜ್ ಮತ್ತು ವಿಯನ್ನ ಪ್ರದೇಶಗಳು ಸಾಗರದಿಂದ ಬೇರ್ಪಟ್ಟು ಉಪ್ಪುನೀರಿನ ಸರೋವರಗಳಾಗಿ ಕ್ರಮೇಣ ಸಿಹಿನೀರಿನ ಸರೋವರಗಳಾಗಿ ಮಾರ್ಪಟ್ಟವು. ಸಮಭಾಜಕದ ಉದ್ದಕ್ಕೂ ಪರ್ವತಶ್ರೇಣಿಗಳು ಉದಯಿಸಿದುವು. ಈ ಭೂಚಲನೆಯೊಂದಿಗೆ ಅಗಾಧ ಪ್ರಮಾಣದಲ್ಲಿ ಶಿಲಾರಸ ಅಂತಸ್ಸರಣಗೊಂಡಿದೆ. ಪರ್ವತಪ್ರದೇಶಗಳಲ್ಲಿ ಅಂತಸ್ಸರಣಗೊಂಡು ಆದ ಶಿಲೆಗಳನ್ನು ಕ್ಷಾರ ಆಥವಾ ಪೆಸಿಫಿಕ್ ಗುಂಪು ಶಿಲೆಗಳೆಂದೂ ಪ್ರದೇಶಗಳ ಹೊರಗೆ ಹೀಗೆ ಆದ ಶಿಲೆಗಳನ್ನು ಆಮ್ಲಿತ ಅಥವಾ ಅಟ್ಲಾಂಟಿಕ್ ಶಿಲೆಗಳೆಂದೂ ಹೆಸರಿಸಿದೆ. 

	ಯೂರೊಪಿನ ಮಯೊಸೀನ್ ಸ್ತೋಮವನ್ನು ಮೂರು ಭಾಗಗಳಾಗಿ ವಿಭಾಗಿಸಿದೆ. ಕೆಳಭಾಗವನ್ನು ಇಟಲಿಯ ಲಂಘ ಎಂಬ ಸ್ಥಳದ ಹೆಸರಿನಿಂದ ಲಂಘಯನ್ ಎಂದು ಕರೆದಿದೆ. ಲಂಘಯನ್ ಶ್ರೇಣಿಯ ಸುಮಾರು 610 ಮೀಗಳಷ್ಟು ಉದ್ದ ಸಾಗರಜನಿತ ಮಾರಲ್ ಶಿಲೆಗಳಿಂದ ಕೂಡಿದೆ. ಇವುಗಳಲ್ಲಿ ಟಿರೊಪಾಡ್‍ಗಳೂ ಆಸ್ಟ್ರಿಯ ನೆಗ್ಲೆಕ್ಟ, ಅಟುರಿಯ ಅಟುರಿ ಮೊದಲಾದ ಜೀವ್ಯವಶೇಷಗಳೂ ಇವೆ. ಸ್ವಲ್ಪ ಕಾಲಾನಂತರ ಡಪೆರೆಟ್ ಎಂಬ ಭೂವಿಜ್ಞಾನಿ ಬೊರ್ಡಿಯಾ ಪ್ರದೇಶ ಮತ್ತು ಗೆರೊನ್ನೆ ಮೈದಾನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ರೂಪುಗೊಂಡ ಮಯೋಸಿನ್ ಕೆಳಭಾಗವನ್ನು ಗುರುತಿಸಿ ಇಲ್ಲಿಯ ಶಿಲೆಗಳನ್ನು ಬರ್ಡಿಗೇಲಿಯನ್ ಶ್ರೇಣಿ ಎಂದಿದ್ದಾನೆ. ಈ ಹೆಸರು ಈಗ ಮಾನ್ಯತೆ ಪಡೆದಿದೆ. ಶಿಲೆಗಳಲ್ಲಿ ಕ್ಲಿಪಿಯಾಸ್ಟರ್ ಕಾರ್ಡಿಯಮ್, ಬುರ್ಡಿಗೇಲಿನಮ್, ಪೆಕ್ವೆನ್ ಬುರ್ಡಿಗೇಲಿನಮ್, ಲ್ಯೂಸಿನಕಾಲ್ಯುಮೆಲ್ಲ ಮೊದಲಾದ ಅವಶೇಷಗಳಿವೆ.  ಪ್ಯಾರಿಸ್ ಪ್ರದೇಶಗಳಲ್ಲಿ ಭೂನಿಕ್ಷೇಪಗಳು ಸಂಚಯಗೊಂಡಿವೆ. ಇವುಗಳಲ್ಲಿ ಸ್ತನಿಗಳ ಅವಶೇಷ ಭಂಡಾರವೇ ಹುದುಗಿದ್ದು ವಿಜ್ಞಾನಿಗಳ ವಿಶೇಷ ಆಸಕ್ತಿಗೆ ಕಾರಣವಾಗಿವೆ. ಸ್ತನಿಗಳ ಪೈಕಿ ಆನೆಗಳು ಮತ್ತು ಕಪಿಗಳು ಉಲ್ಲೇಖಾರ್ಹ. ಆನೆಗಳಲ್ಲಿ ಡೈನೊತೀರಿಯಮ್ ಮತ್ತು ನಾನಾ ವಿಧಗಳ ಮ್ಯಾಸ್ಟಡಾನ್‍ಗಳು ಮುಖ್ಯವಾದವು. ಕಪಿಗಳಲ್ಲಿ ಪ್ಲಿಯೊಪಿತಿಕಸ್ ಮತ್ತು ಡಯೊಪಿತಿಕಸ್‍ಗಳು ಮುಖ್ಯ. ವಿಯನ್ನ ಪ್ರದೇಶದಲ್ಲಿ  ಆಳಜೇಡು ನೀಕ್ಷೇಪಗಳು ಈ ಶಿಲೆಗಳಿಗೆ ಸರಿದೂಗುತ್ತವೆ. ಇವುಗಳಲ್ಲಿ ತೆಳು ಚಿಪ್ಟಿನ ಮೃದ್ವಂಗಿಗಳು ಮತ್ತು ಟೀರೊಪಾಡ್‍ಗಳು ಇವೆ. ಅಟೂರಿಯ ಅಟುರಿ ಈ ಶಿಲೆಗಳ ವಿಶಿಷ್ಟ ಅವಶೇಷ. 
ಮಧ್ಯಭಾಗಕ್ಕೆ ಹೆಲ್ವಿಟಿಯನ್ ಶ್ರೇಣಿ ಎಂದು ಹೆಸರು. ಇದು ಇಟಲಿಯ ಸುಪರ್ಗ ಬೆಟ್ಟದಲ್ಲಿ ಉತ್ತಮವಾಗಿ ರೂಪುಗೊಂಡಿದೆ. ಜೇಡು ಮಾರಲ್ ಮತ್ತು ಹಳದಿ ಮರಳುಶಿಲೆಗಳಿಂದ ಆಗಿದೆ. ಈ ಶಿಲೆಗಳಲ್ಲಿ ನಲ್ಲಿಪೋರ, ಬ್ರಿಯೊಜೋವ, ಟೆರಿಬ್ಯಾಟುಲ ಮತ್ತು ಪೆಕ್ಟೆನ್‍ಗಳು ಹೇರಳವಾಗಿವೆ. ಹೆಲ್ವಿಟಿಯನ್ ಶ್ರೇಣಿ ವಿಯನ್ನ ಮತ್ತು ಸ್ವಿಟ್‍ಜರ್‍ಲೆಂಡಿನಲ್ಲಿ ಇನ್ನೂ ಉತ್ತಮವಾಗಿ ರೂಪುಗೊಂಡಿದೆ. ಇದು ಮುಖ್ಯವಾಗಿ ಮರಳುಶಿಲೆ ಮತ್ತು ಸುಣ್ಣಶಿಲೆಗಳಿಂದ ಕೂಡಿ ಅಸ್ಟ್ರಿಯ, ಪೆಕ್ಟಂಕುಲಸ್ ಮೊದಲಾದ ಜೀವ್ಯವಶೇಷಗಳನ್ನು ಹೊಂದಿವೆ. ಪ್ಯಾರಿಸ್ ಪ್ರದೇಶದಲ್ಲಿ  ಇದು ತೌರನ್ ಫಾಲಿನ್ಸ್‍ಗಳಿಂದ ಪ್ರತಿನಿಧಿಸಲ್ಪಟ್ಟಿದೆ. ಇದರಲ್ಲಿ ಅನೇಕ ಹವಳಗಳು ಮತ್ತು ಮೃದ್ವಂಗಿಗಳ ಅವಶೇಷಗಳಿವೆ. 

	ಟಾರ್ಟೊನಿಯನ್ ಶಿಲೆಗಳು ಉತ್ತರ ಇಟಲಿಯ ಟಾರ್ಟೊನಿಯ ಎಂಬಲ್ಲಿ 200 ಮೀಟರುಗಳಷ್ಟು ದಪ್ಪ ಸಂಚಯನಗೊಂಡಿವೆ. ಈ ಶಿಲೆಗಳಲ್ಲಿ ಹೇರಳ ಅವಶೇಷಗಳು ಇವೆ. ಪ್ಲೂರೊಟೋಮ ಮತ್ತು ಕೋನಸ್‍ಗಳಂತೂ ತುಂಬಿವೆ. ವಿಯನ್ನ ಪ್ರದೇಶದಲ್ಲಿ ಈ ಶ್ರೇಣಿ ಬೇಡನ್ ಮಾರಲ್ ಮತ್ತು ಲಿತೆನ್ ಕಾಕ್‍ಗಳಿಂದ ಆಗಿದೆ. ಮೊದಲನೆಯದರಲ್ಲಿ ಪ್ಲೂರೊಟೋಮಗಳು ತುಂಬಿರುವುದರಿಂದ ಅವನ್ನು ಪ್ಲೂರೊಟೋಮ ಮಾರಲ್‍ಗಳೆಂದೇ ಕರೆಯಲಾಗಿದೆ. ಲಿತೆನ್‍ಕಾಕ್ ಸುಣ್ಣಶಿಲೆ ಲಿತೊತ್ಯಾಮ್ನಿಯಾಕ್ ಹವಳಗಳು ಮತ್ತು ಬ್ರಿಯೊಜೋವಗಳ ದಿಬ್ಬಗಳನ್ನು ಹೊಂದಿದೆ. ಇವುಗಳಲ್ಲಿ ಫೊರಮಿನಿಫೆರ ಮತ್ತು ಕ್ರಿಪಿಯಾಸ್ಟರುಗಳು ಹೆಚ್ಚಾಗಿಯೇ ಇವೆ. ಹೆಲ್ವಿಟಯನ್ ಮತ್ತು ಟಾರ್ಟೊನಿಯನ್ ಸೇರಿಸಿ ವಿಂದೊಬೋನಿಯನ್ ಶ್ರೇಣಿ ಎಂದು ಕರೆಯಲಾಗಿದೆ. ಟಾರ್ಟೋನಿಯನ್ ಮೇಲಿರುವ ಶಿಲೆಗಳಿಗೆ ಸವರ್iಟಿಯನ್ ಶ್ರೇಣಿ ಎಂದು ಹೆಸರು. ಇದರಲ್ಲಿ ಲಿತೆನ್‍ಕಾಕ್ ಶಿಲೆಗಳಲ್ಲಿರುವ ಲಿತೊತ್ಯಾಮ್ನಿಯಾನ್, ಹವಳಗಳು ಮತ್ತು ಬ್ರಿಯೊಜೋವಗಳು ಇಲ್ಲ. ಸೆರಿತಿಯಮ್ ಮಾತ್ರ ಇದೆ. ಆದ್ದರಿಂದ ಈ ಪ್ರದೇಶ ಮಯೊಸೀನ್ ಅಂತ್ಯಕಾಲದಲ್ಲಿ ಸಮುದ್ರ ಸಂಪರ್ಕ ಕಡಿದುಕೊಂಡು ಇದರಲ್ಲಿಯ ನೀರಿನಲ್ಲಿ ಲವಣಾಂಶ ಹೆಚ್ಚಿರಬೇಕೆಂದು ನಿರ್ಣಯಿಸಲಾಗಿದೆ. ಸ್ವಿಟ್‍ಜóರ್‍ಲೆಂಡಿನಲ್ಲಿ ಈ ಕಾಲದ ಶಿಲೆಗಳು ನದಿ ಮತ್ತು ಸರೋವರ ನಿಕ್ಷೇಪಗಳಾಗಿ ಇವೆ. ಇವುಗಳಲ್ಲಿ ಮ್ಯಾಸ್ಟಡಾನ್, ಟಪೀರ್, ಜಿಂಕೆ, ಖಡ್ಗಮೃಗ ಮುಂತಾದ ಸ್ತನಿಗಳೂ ಮತ್ಸ್ಯ ಮತ್ತು ದ್ವಿಚರ ಪ್ರಾಣಿಗಳ ಅವಶೇಷಗಳೂ ಇವೆ. ಈ ನಿಕ್ಷೇಪದ ಸಸ್ಯಾವಶೇಷಗಳು ಉಷ್ಣವಲಯದ ಲಕ್ಷಣಗಳನ್ನು ಹೊಂದಿವೆ.

	ಭಾರತದ ಪರ್ಯಾಯದ್ವೀಪ: ಮಯೊಸೀನ್‍ಸ್ತೋಮ ಅನೇಕ ಕಡೆಗಳಲ್ಲಿ ರೂಪುಗೊಂಡಿದೆ. ಇದರ ಕೆಳಭಾಗಕ್ಕೂ ಮೇಲುಭಾಗಕ್ಕೂ ತೀವ್ರ ವ್ಯತ್ಯಾಸ ಕಂಡುಬರುವುದರಿಂದ ಅವನ್ನು ಬೇರೆ ಬೇರೆಯಾಗಿ ಅವಲೋಕಿಸುವುದು ಉತ್ತಮ. ಕೆಳಭಾಗ ಅನೇಕ ಕಡೆ ರೂಪುಗೊಂಡು ಬೇರೆ ಬೇರೆ ಹೆಸರುಗಳಿಂದ ಉಲ್ಲೇಖಿತವಾಗಿದೆ. ಸಿಂಧ್‍ನಲ್ಲಿಯ ನಾರಿಶಿಲೆಯ ಮೇಲುಭಾಗ ಮತ್ತು ಗಾಜ್ ಶಿಲಾವರ್ಗ ಈ ಕಾಲಕ್ಕೆ ಸೇರಿದವು. ಈ ಕಾಲದ ಶಿಲೆಗಳನ್ನು ಕಾಶ್ಮೀರದಲ್ಲಿ ಮುರ್ರಿ ಶಿಲಾಶ್ರೇಣಿ ಎಂದೂ ಸಿಮ್ಲಾಪ್ರದೇಶದಲ್ಲಿ ದಾಗ್‍ಷಾಯ್ ಮತ್ತು ಕಸಾಲಿ ಶ್ರೇಣಿಗಳೆಂದೂ ಅಸ್ಸಾಮಿನಲ್ಲಿ ಬರೈಲ್ ಶಿಲಾಶ್ರೇಣಿ ಎಂದೂ ಕರೆಯಲಾಗಿದೆ. ಬರ್ಮಾದಲ್ಲಿ ಪೆಗು ಶಿಲಾವರ್ಗದ ಮೇಲುಭಾಗ ಈ ಕಾಲಕ್ಕೆ ಸೇರಿದೆ. ಮಯೊಸೀನ್ ಕಾಲದಲ್ಲಿ ಎಲ್ಲೆಲ್ಲಿಯೂ ಸಮುದ್ರ ನಿರ್ಗಮನವಾಯಿತು. ಸಿಂಧ್‍ನಲ್ಲಿ ಸಮುದ್ರ ಅಳಿವೆಯಾಗಿ ಕ್ರಮೇಣ ನೆಲಪ್ರದೇಶವಾಗಿರುವುದನ್ನು ಸೂಚಿಸುತ್ತದೆ.

	ಬಲೂಚಿಸ್ತಾನದಲ್ಲಿ ನಮ್ಮುಲೈಟಿಸ್‍ಗಳಿಂದ ಕೂಡಿದ ಮರಳು ಮಿಶ್ರಿತ ಸುಣ್ಣಶಿಲೆಯ ಮೇಲೆ ನದೀನಿಕ್ಷೇಪಗಳಾದ ಮರಳು ಶಿಲೆಗಳು ಸಂಚಯನಗೊಂಡಿವೆ. ಇವುಗಳಲ್ಲಿ ನದಿಗಳಲ್ಲಿರುವ ಲೆಮಲಿಬ್ರ್ಯಾಂಕ್ ಚಿಪ್ಪುಗಳೂ ಬೆನ್ನೆಲುಬುಳ್ಳ ಪ್ರಾಣಿಗಳ ಅವಶೇಷಗಳೂ ಇರುತ್ತವೆ. ಭಾರತಪರ್ಯಾಯ ದ್ವೀಪದಲ್ಲಿ ಸ್ತನಿಗಳ ಅವಶೇಷಗಳನ್ನು ಹೊಂದಿರುವ ಶಿಲೆಗಳಲ್ಲಿ ಇವೇ ಅತ್ಯಂತ ಪ್ರಾಚೀನವಾದವು. ಆಂತ್ರಕೋತೀರಿಯಮ್, ಕಾರ್ಡಕೊತೀರಿಯಮ್, ಬಲೂಚಿತೀರಿಯಮ್, ಡಿಸೆರತೀರಿಯಮ್, ಬ್ರಾಕಿಯೊಡಸ್, ಟೆಲಿಯೊನೆರಾಸ್, ಟೆಲ್ಮಟೊಡಾ ಈ ಶಿಲೆಗಳಲ್ಲಿರುವ ಮುಖ್ಯ ಸ್ತನಿ ಅವಶೇಷಗಳು. 

	ಈ ಕಾಲದಶಿಲೆಗಳಿಗೆ ತಿರುವಾಂಕೂರಿನಲ್ಲಿ ವಾರ್ಕೆಲಾ ಪದರಗಳೆಂದೂ ಮದ್ರಾಸ್ ತೀರಪ್ರದೇಶದಲ್ಲಿ ಕಡಲೂರು ಮರಳುಶಿಲೆಗಳೆಂದೂ ಹೆಸರು. ಇನ್ನೂ ಅನೇಕ ಕಡೆ ಬೇರೆ ಬೇರೆ ಹೆಸರುಗಳಿವೆ. 

	ಮಯೊಸೀನ್ ಆದಿಕಾಲದ ಬಳಿಕ ಹಿಮಾಲಯದ ಮೇಲೊಗೆಯುವಿಕೆಯ ಮತ್ತೊಂದು ಹಂತ ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಟೆತಿಸ್ ಸಾಗರದಲ್ಲಿ ನಿಕ್ಷೇಪಗೊಂಡಿದ್ದ ಮಹಾಶಿಲಾನಿಕ್ಷೇಪ ಅನೇಕ ಕಡೆ ಬೆಟ್ಟಪರ್ವತಗಳಾಗಿ ಮೇಲೊಗೆಯಲ್ಪಟ್ಟಿತು. ಜೊತೆಗೆ ಬಹಳ ಉದ್ದವಾದ, ಆದರೆ ಕಡಿಮೆ ಅಗಲದಿಂದ ಕೂಡಿದ ತಗ್ಗು ಪ್ರದೇಶ ಹಿಮಾಲಯ ಪರ್ವತ ಶ್ರೇಣಿಗೂ ಪರ್ಯಾಯದ್ವೀಪಕ್ಕೂ ನಡುವೆ ಉಂಟಾಯಿತು. ಹಿಮಾಲಯ ಪರ್ವತಗಳಲ್ಲಿ ಹುಟ್ಟಿದ ನದಿUಳು ಮತ್ತು ಅನೇಕ ಉಪನದಿಗಳು ಮೆಕ್ಕಲನ್ನು ತಂದು ಈ ತಗ್ಗು ಪ್ರದೇಶದಲ್ಲಿ ಹರಡಿದುವು. ಈ ಕಾರ್ಯ ಮಯೊಸೀನ್ ಯುಗದ ಮಧ್ಯದಲ್ಲಿ ಪ್ರಾರಂಭವಾಗಿ ಪ್ಲೀಸ್ಟೊಸೀನ್ ಯುಗದ ಆದಿಯ ತನಕವೂ ಅಂದರೆ ಹಿಮಾಲಯದ ಮೇಲೇರಿಕೆಯ ಮತ್ತೊಂದು ಹಂತದ ಪ್ರಾರಂಭದ ತನಕವೂ ನಡೆಯಿತು. ಈ ಶಿಲಾಸಮುದಾಯ ಪರ್ಯಾಯ ದ್ವೀಪದ ಹೊರಗಡೆ ಮತ್ತು ಹಿಮಾಲಯ ಪರ್ವತಗಳ ಬುಡದಲ್ಲಿ ವಿಶೇಷವಾಗಿ ಹೊರಕಾಣುತ್ತದೆ. ಇವು ಸಿಂಧೂ ನದಿಯಿಂದ ಬ್ರಹ್ಮಪುತ್ರ ನದಿಯವರೆಗೆ ಹಿಮಾಲಯದ ತಪ್ಪಲಿನಲ್ಲೆಲ್ಲ ನಿಕ್ಷೇಪಗೊಂಡಿರುವುವು. ಆದರೆ ಹರಿದ್ವಾರದ ಹತ್ತಿರವಿರುವ ಶಿವಾಲಿಕ್ ಬೆಟ್ಟಗಳಲ್ಲಿ, ಇವು ಅತಿ ಶ್ರೇಷ್ಠ ರೀತಿಯಲ್ಲಿ ಹೊರಹೊಮ್ಮಿವೆ. ಆದ್ದರಿಂದ ಇವನ್ನು ಶಿವಾಲಿಕ್ ಶಿಲಾಸಮುದಾಯ ಎಂದು ಕರೆಯಲಾಗಿದೆ. ಅಲ್ಲದೆ ಇದರ ಮೊದಲ ಪರಿಚಯ ವಿಜ್ಞಾನಿಗಳಿಗೆ ಆದುದೂ ಈ ಪ್ರದೇಶದಲ್ಲೇ. ಇದರಲ್ಲಿರುವ  ಜೀವ್ಯವಶೇಷಗಳ ಭಂಡಾರ ಪ್ರಪಂಚಕ್ಕೆ ಗೊತ್ತಾದುದು ಇಲ್ಲಿಂದಲೇ. ಶಿಲಾಸಂಯೋಜನೆ ಮತ್ತು ಅವುಗಳಲ್ಲಿರುವ ಜೀವ್ಯವಶೇಷಗಳು ಒಂದೇ ರೀತಿ ಇರುವ ಈ ಶಿಲೆಗಳಿಗೆ ಒಂದೊಂದು ಸ್ಧಳದಲ್ಲಿ ಒಂದೊಂದು ಹೆಸರಿದೆ; ಸಿಂಧ್‍ನಲ್ಲಿ ಮಂಚಾರ್ ಶಿಲಾ ಸಮುದಾಯ, ಬಲೂಚಿಸ್ತಾನದಲ್ಲಿ ಮೆಕ್ರಾನ್, ಅಸ್ಸಾಮ್‍ನಲ್ಲಿ ತಿಪಮ್, ಜೂಪಿತಿಲ ಮತ್ತು ದಿಹಿಂಗ್. ಬರ್ಮಾದಲ್ಲಿ ಇರವಾಡಿ ಶಿವಾಲಿಕ್ ಸಮುದಾಯವನ್ನು ಸ್ತನಿಗಳ ಆಧಾರದ ಮೇಲೆ ಮೂರು ಭಾಗಗಳಾಗಿ ವಿಭಾಗಿಸಿದೆ. ಕೆಳ ಮತ್ತು ಮಧ್ಯಭಾಗಗಳು ಸ್ವಲ್ಪ ಹೆಚ್ಚುಕಡಿಮೆ ಈ ಕಾಲದವೆಂದು ಹೇಳಬಹುದು. 

ಮಯೊಸೀನ್ ಯುಗದ ಜೀವರಾಶಿ: ಈ ಯುಗ ಸ್ತನಿಗಳ ವಿಕಾಸ ಮತ್ತು ವಿಸ್ತರಣೆಯಲ್ಲಿ ಅತಿ ಮುಖ್ಯವಾದ ಮೈಲಿಗಲ್ಲು ಎಂದೇ ಇದನ್ನು ಸ್ತನಿಗಳ ಸುವರ್ಣಯುಗ ಎಂದು ಹೇಳಬಹುದು. ಪ್ರಾಚೀನ ಸ್ತನಿಗಳೆಲ್ಲ ವಂಶನಷ್ಟ ಹೊಂದಿದುವು. ಪ್ರಗತಿಪರ ಸ್ತನಿಗಳು ಉನ್ನತಿಯ ಶಿಖರ ಮುಟ್ಟಿದುವು. ಈ ಯುಗ ಡೈನೋತೀರಿಯಮ್ ಮತ್ತು ಮ್ಯಾಸ್ಟಡಾನ್‍ಗಳ ಉದಯ ಮತ್ತು ಪೂರ್ಣ ಬೆಳೆವಣಿಗೆಯನ್ನು ಕಂಡಿತ್ತು. ಮರ್ಕಿಹಿಪ್ಪಸ್ ಎಂಬುದು ಈ ಯುಗದ ವಿಶಿಷ್ಟ ಕುದುರೆ. ಇದಕ್ಕೆ ಮೂರು ಗೊರಸುಗಳಿವೆ. ಮಧ್ಯಗೊರಸು ಮಾತ್ರ ದೊಡ್ಡದು. ಪಕ್ಕದ ಗೊರಸುಗಳು ನೆಲತಾಗುತ್ತಿರಲಿಲ್ಲ. ಮಯೊಸೀನ್ ಅಂತ್ಯಕಾಲದಲ್ಲಿ ಮರ್ಕಿಹಿಪ್ಪಸ್ ಕುದುರೆಗಳಿಂದ ಹಿಪ್ಪೇರಿಯನ್ ಮತ್ತು ಪ್ಲಿಯೊಹಿಪ್ಪನ್ ಎಂಬ ಎರಡು ಹೊಸಕುದುರೆಗಳು ಉದಯಿಸಿದುವು. ಒಂಟೆಗಳು, ಖಡ್ಗಮೃಗಗಳು ಮತ್ತು ಓರಿಯಾಡಾನ್‍ಗಳು ಹೇರಳವಾಗಿದ್ದುವು. ದೈತ್ಯಾಕಾರದ ಹಂದಿಗಳು ಉನ್ನತಿಯ ಗರಿಷ್ಠ ಮಿತಿ ಮುಟ್ಟಿದವು.

	ಈ ಕಾಲದ ಸಸ್ಯವರ್ಗವೂ ಯೂರೊಪಿನಲ್ಲಿ ಉಷ್ಣವಲಯ ಮತ್ತು ಶೀತವಲಯಗಳ ಸಸ್ಯಗಳ ಮಿಶ್ರಣದಿಂದ ಕೂಡಿತ್ತು.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ